ಪೋರ್ಚುಗಲ್ಲಿನ ರಾಜಧಾನಿ. ಪ.ರೇ 9° ಮತ್ತು ಉ.ಅ 39°ಮೇಲೆ, ಟಾಗಸ್ ನದಿಯ ದಂಡೆಯ ಮೇಲೆ, ಆ ನದಿಯಿಂದ 14ಕಿಮೀ ದೂರದಲ್ಲಿದೆ. ಸಪ್ತ ಗಿರಿಗಳಿಂದಾವೃತವಾಗಿದೆ. ಪೋರ್ಚುಗಲ್‍ನ ಗಣರಾಜ್ಯದ ಪ್ರಧಾನ ನೌಕಾನೆಲೆ. ಯುರೋಪ್ ಖಂಡದ ಪಶ್ಚಿಮದ ಕೊನೆಯ ನಗರ. ಈ ನಗರದ ವಿಸ್ತೀರ್ಣ ಸು. 84 ಚ.ಕಿಮೀ. ಆಲ್ಫಾಮ, ಸಿಡೇಟ್ ಬೈಕ್ಸ, ಬೈರೊ ಆಲ್ಟೋ ಮತ್ತು ಅಕ್ಲಾಂಟಿಕ ಎಂಬ ನಾಲ್ಕು ಜಿಲ್ಲೆಗಳಿವೆ.

ಲಿಸ್ಬನ್ ನಗರದ್ದು ಬೆಚ್ಚನೆಯ ವಾಯುಗುಣ. ಬೇಸಗೆಯಲ್ಲಿ ಗರಿಷ್ಠ ಉಷ್ಣಾಂಶ 28°ಸಿ. ಡಿಸೆಂಬರ್ ಮತ್ತು ಜನವರಿಯಲ್ಲಿ ಹೆಚ್ಚು ಶೀತಚಳಿ, ಆದರೆ ನೀರು ಗಡ್ಡೆಕಟ್ಟುವುದಿಲ್ಲ. ಸಮುದ್ರದ ಸಾಮೀಪ್ಯ ತುಂತುರು ಮಳೆ ಮತ್ತು ಮಂಜು ಮುಸುಕಿದ ವಾತಾವರಣದ ಪ್ರಭಾವ ಹೊಂದಿದೆ. ವಾರ್ಷಿಕ ಮಳೆ 29.45".

ಲಿಸ್ಬನ್‍ನಗರದ ಜನಸಂಖ್ಯೆ 6,81,063 (2000). ಇಲ್ಲಿ ಪೋರ್ಚು ಗೀಸರು (ಸೇ.70), ಅಲ್ಪಸಂಖ್ಯಾತ ವರ್ಗದವರು (ಸೇ.20) ಮತ್ತು ಆಫ್ರಿಕನ್ನರು (ಸೇ.10) ಇದ್ದಾರೆ. ಸಾಕ್ಷರತೆ ಸೇ.87.4. ಪೋರ್ಚುಗೀಸ್ ಸಾಮಾನ್ಯ ಭಾಷೆ. ಇಲ್ಲಿ ಕ್ರೈಸ್ತಧರ್ಮ ಪ್ರಮುಖ. ಪ್ರಾಟೆಸ್ಟಂಟ್‍ರು (ಸೇ. 06), ಕ್ಯಾಥೋಲಿಕರು (ಸೇ. 94) ಇದ್ದಾರೆ.

ಲಿಸ್ಬನ್ ನಗರ ಪ್ರಕೃತಿ ವಿಕೋಪದಿಂದ ಮುಕ್ತವಾಗಿಲ್ಲ. 1755ರಲ್ಲಿ ಉಂಟಾದ ಭಯಾನಕ ಭೂಕಂಪದಿಂದ ನಗರದ ಬಹುಭಾಗ ನಾಶವಾಯಿತು. ಅಪಾರ ಆಸ್ತಿಯ ಹಾನಿಯುಂಟಾಯಿತು 60,000 ಜನ ಪ್ರಾಣ ಕಳೆದು ಕೊಂಡರು.

ಲಿಸ್ಬನ್ ನಗರ ಮತ್ತು ಅಲ್ಲಿನ ಜನ ಜೀವನ ಆಧುನಿಕ ಜೀವನ ಶೈಲಿಯಾಗಿದ್ದು ಇಂಗ್ಲೆಂಡ್ ಅಥವಾ ಬರ್ಲಿನ್‍ನ ಜನಜೀವನದ ಮಾದರಿಯಲ್ಲಿದೆ. ಇಲ್ಲಿನ ನಾಗರಿಕರು ಸಾಂಸ್ಕೃತಿಕ ಚಟುವಟಿಕೆ, ಕೂಟಗಳು ಮುಂತಾದ ಸಮಾರಂಭಗಳಿಗೆ ಆದ್ಯತೆ ನೀಡುತ್ತಾರೆ. ಉಡುಗೆ ತೊಡುಗೆಗಳು ಸಾಂಪ್ರದಾಯಿಕ. ಅಲ್ಲದೇ ಲಿಸ್ಬನ್ ಬಂದರು ಯುರೋಪಿನ ಶ್ರೇಷ್ಠ ಬಂದರುಗಳಲ್ಲೊಂದಾಗಿದ್ದು ಪೋರ್ಚುಗಲ್ಲಿನ ಹೆಚ್ಚಿನ ವಿದೇಶಿ ವ್ಯಾಪಾರ ಈ ಬಂದರಿನ ಮೂಲಕವೇ ನಡೆಯುತ್ತದೆ. ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ವಾಸ್ಕೋಡಗಾಮ ಲಿಸ್ಬನ್‍ನ ಈ ಬಂದರಿನ ಮೂಲಕವೇ ಜಲಯಾನ ಪ್ರಾರಂಭಿಸಿದ (1497-98).

ಲಿಸ್ಬನ್ ಯಂತ್ರಗಳು ಮತ್ತು ಸಾಗಣೆ ಸಲಕರಣೆಗಳು, ರಸಾಯನಿಕಗಳು, ಪೆಟ್ರೋಲಿಯಂ, ಬಟ್ಟೆ ಮತ್ತು ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಂಡು, ಸಿದ್ಧ ಉಡುಪು, ರಸಾಯನಿಕ ಹಾಗೂ ಕಾಗದ ರಫ್ತು ಮಾಡುತ್ತದೆ.

ಕೈಗಾರಿಕೆಗಳಾದ ಬಟ್ಟೆ ಮತ್ತು ಪಾದರಕ್ಷೆ, ಮರ, ಕಾಗದ, ಲೋಹಗಾರಿಕೆ, ತೈಲ ಶುದ್ಧೀಕರಣ, ರಸಾಯನಿಕ, ಮೀನುಗಳ ಡಬ್ಬೀಕರಣ ಮತ್ತು ಮಧ್ಯಸಾರ ಕಾರ್ಖಾನೆ ಕೈಗಾರಿಕೆಗಳು ನಗರದಲ್ಲಿವೆ.
		
(ಕೆ.ಎಲ್.ಪಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ